ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು, ಕೆಲವು ಶತಮಾನಗಳ ಕಾಲ ಪ್ರತ್ಯೇಕೀಕರಣ
ಮತ್ತು ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದ, ಹನ್ನೆರಡನೆಯ ಶತಮಾನದ ಶಿವಶರಣರ ವಚನಗಳನ್ನು ಪುನರುಜ್ಜೀವನಗೊಳಿಸುವ
ಕೆಲಸಕ್ಕಾಗಿ ತಮ್ಮ ಜೀವಮಾನವನ್ನೇ ಮುಡಿಪಿಟ್ಟ ಹಿರಿಯ ವಿದ್ವಾಂಸರು. ಪ್ರಶ್ನಾತೀತವಾದ ಸಾಹಿತ್ಯಕ ಮೌಲ್ಯ
ಮತ್ತು ಸಾಮಾಜಿಕ ಪ್ರಸ್ತುತೆಗಳಿದ್ದರೂ ವಚನಗಳು ಅಜ್ಞಾತವಾಗಿಯೇ ಉಳಿದಿದ್ದು ಆಶ್ಚರ್ಯ ಮತ್ತು ವಿಷಾದಗಳನ್ನು
ಹುಟ್ಟಿಸುವ ಸಂಗತಿ. ಹಳಕಟ್ಟಿಯವರು ಉತ್ತರ ಕರ್ನಾಟಕದ ಮೂಲೆಮೂಲೆಗಳಲ್ಲಿ ಹುಡುಕಿ, ಅಮೂಲ್ಯವಾದ ಹಸ್ತಪ್ರತಿಗಳ
ಭಂಡಾರವನ್ನೇ ಸಂಶೋಧನೆ ಮಾಡಿ, ಅವುಗಳನ್ನು ಶ್ರಮವಹಿಸಿ ಸಂಪಾದಿಸುವ ಹಾಗೂ ಪ್ರಕಟಿಸುವ ಕೆಲಸದಲ್ಲಿ
ನಿರಂತರವಾಗಿ ತೊಡಗಿಕೊಂಡರು. ಇಂದು, ಮರುರಚಿತವಾಗಿರುವ ವಚನಸಾಹಿತ್ಯದ ಭವ್ಯವಾದ ಕಟ್ಟೋಣವು ಹಳಕಟ್ಟಿಯವರಂತಹ
ಹಿರಿಯರ ಸ್ವಾರ್ಥರಹಿತ ದುಡಿಮೆಯ ಫಲವಾಗಿದೆ.
ಧಾರವಾಡದಲ್ಲಿ ಹುಟ್ಟಿದ ಹಳಕಟ್ಟಿಯವರು, ಅದೇ ಊರಿನ ಬಾಸೆಲ್ ಮಿಷನ್
ಹೈಸ್ಕೂಲ್ ಮತ್ತು ಮುಂಬಯಿಯ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ, ಮುಂಬಯಿ ವಿಶ್ವವಿದ್ಯಾಲಯದಿಂದ
ಬಿ.ಎ. ಮತ್ತು ಎಲ್.ಎಲ್.ಬಿ. ಪದವಿಗಳನ್ನು ಪಡೆದರು. ಅನಂತರ ಬಿಜಾಪುರದಲ್ಲಿ ವಕೀಲಿ ವೃತ್ತಿಯನ್ನು
ಮೊದಲು ಮಾಡಿದರು. ಆದರೆ, ಅವರಿಗೆ ಪತ್ರಿಕೋದ್ಯಮ ಮತ್ತು ಸಮಾಜಸೇವೆಗಳಲ್ಲಿ ತೀವ್ರವಾದ ಆಸಕ್ತಿಯಿತ್ತು.
ಅವರು, ‘ವೀರಶೈವ ಶಿಕ್ಷಣ ಫಂಡ್’,
‘ವೀರಶೈವ ವಿದ್ಯಾವರ್ಧಕ ಸಂಘ’, ‘ಸಿದ್ದೇಶ್ವರ
ಮಾಧ್ಯಮಿಕಶಾಲೆ’, ’ಸಿದ್ದೇಶ್ವರ
ಬ್ಯಾಂಕ್’ ಮುಂತಾದ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದರು.
ಕೆಲ ಕಾಲದ ನಂತರ, ಅವರು ವಕೀಲಿ ವೃತ್ತಿಯನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟು ವಚನಸಾಹಿತ್ಯದ ಪುರುಜ್ಜೀವನದಲ್ಲಿ
ತಲ್ಲೀನರಾದರು. 1903 ರಲ್ಲಿ ಪ್ರಾರಂಭವಾದ ವಚನಗಳ ಅನ್ವೇಷಣಕಾರ್ಯವು ಅವರ ಕೊನೆಯುಸಿರಿನವರೆಗೆ ಮುಂದುವರಿಯಿತು.
1926 ರಲ್ಲಿ ಅವರು ಪ್ರಾರಂಭಿಸಿದ ‘ಶಿವಾನುಭವ’ವು ಮೊದಲು ತ್ರೈಮಾಸಿಕವಾಗಿದ್ದು ಅನಂತರ ತಿಂಗಳ ಪತ್ರಿಕೆಯಾಗಿ ಬದಲಾಯಿತು.
ಇದು ಸ್ಥೂಲವಾಗಿ ಧರ್ಮಕ್ಕೆ ಮತ್ತು ನಿರ್ದಿಷ್ಟವಾಗಿ ವೀರಶೈವಧರ್ಮಕ್ಕೆ ಸಂಬಂಧಿಸಿದ ಲೇಖನಗಳಿಗೆ ಪ್ರಧಾನತೆ
ಕೊಡುತ್ತಿತ್ತು. ಅಲ್ಲಿಯ ತನಕ ಅಜ್ಞಾತವಾಸದಲ್ಲಿಯೇ ಇದ್ದ ಅನೇಕ ಕೃತಿಗಳು ಅದರಲ್ಲಿ ಪ್ರಕಟವಾದವು.
ಈ ಪತ್ರಿಕೆಯು ಸುಮಾರು ನಲವತ್ತು ವರ್ಷಗಳ ಕಾಲ ತಡೆಯಿಲ್ಲದೆ ನಡೆಯಿತು.
‘ಶಿವಾನುಭವ’
ಕನ್ನಡದ ಪ್ರಮುಖ ನಿಯತಕಾಲಿಕಗಳಲ್ಲಿ ಒಂದು. ಹಳಕಟ್ಟಿಯವರು 1928 ರಲ್ಲಿ ‘ನವಕರ್ನಾಟಕ’ ಎಂಬ ವಾರಪತ್ರಿಕೆಯನ್ನೂ ಮೊದಲು ಮಾಡಿದರು.
ವಚನಗಳ ಸಂಪಾದನೆಯ ಕ್ಷೇತ್ರದಲ್ಲಿ ಹಳಕಟ್ಟಿಯವರ ಕೊಡುಗೆಯು ಅಸಮಾನವಾದುದು.
ಆ ಕಾಲದಲ್ಲಿ ಗ್ರಂಥಸಂಪಾದನೆಯ ಸೈದ್ಧಾಂತಿಕ ನೆಲೆಗಳು ಇನ್ನೂ ಸಂಪರ್ಣವಾಗಿ ರೂಪುಗೊಂಡಿರಲಿಲ್ಲ. ಬಹುಪಾಲು
ಹಸ್ತಪ್ರತಿಗಳು ದೋಷಮಯವಾಗಿದ್ದು ಪ್ರಕ್ಷೇಪಗಳಿಂದ ತುಂಬಿಹೋಗಿದ್ದವು. ಅನೇಕ ವಚನಕಾರರ ಹೆಸರುಗಳು ಕೂಡ
ಸರಿಯಾಗಿ ಗೊತ್ತಿರಲಿಲ್ಲ. ಅವುಗಳನ್ನು ಪುಸ್ತಕದಲ್ಲಿ ಪ್ರಕಟಿಸುವುದು ದೊಡ್ಡ ಸವಾಲಾಗಿತ್ತು. ಹಳಕಟ್ಟಿಯವರು,
ಹಣಕಾಸಿನ ಸೌಲಭ್ಯಕ್ಕಾಗಿಯೂ ಅವರಿವರನ್ನು ಕಾಡಿಬೇಡುವ ಪರಿಸ್ಥಿತಿಯಿತ್ತು. ಇಂಥ ಸನ್ನಿವೇಶದಲ್ಲಿ ಹಕಟ್ಟಿಯವರು
165 ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಪಾದಿಸಿದರು, ಪ್ರಕಟಿಸಿದರು. ಅದಲ್ಲದೆ, ವಚನಸಾಹಿತ್ಯವನ್ನು
ಅಸಂಖ್ಯಾತ ಲೇಖನಗಳನ್ನು ಪತ್ರಿಕೆಗಳು ಹಗೂ ನಿಯತಕಾಲಿಕಗಳಲ್ಲಿ ಬರೆದರು. ಆ ಪುಸ್ತಕಗಳಲ್ಲಿ ಕೆಲವು
ಒಬ್ಬನೇ ವಚನಕಾರನ ವಚನಗಳಿಗೆ ಮೀಸಲಾಗಿವೆ. ಬೇರೆ ಕೆಲವು ಕೃತಿಗಳಲ್ಲಿ ಹಲವರ ವಚನಗಳನ್ನು ಸಂಕಲಿಸಿದ್ದಾರೆ.
ತಾವು ಪ್ರಕಟಿಸಿದ ಪ್ರತಿಯೊಂದು ಸಂಪುಟದಲ್ಲಿಯೂ ಹಳಕಟ್ಟಿಯವರು ಆಯಾ ವಚನಕಾರನ ತಾತ್ವಿಕ ಮತ್ತು ಸಾಹಿತ್ಯಕ
ಗುಣಲಕ್ಷಣಗಳನ್ನು ಕುರಿತು ವಿವರವಾಗಿ ಬರೆದಿದ್ದಾರೆ. ಅವರು ಸಂಪಾದಿಸಿ ಪ್ರಕಟಿಸಿದ ಕೆಲವು ಕೃತಿಗಳು
ಈ ರೀತಿ ಇವೆ:
- ಶ್ರೀ ಬಸವೇಶ್ವರನ ವಚನಗಳು, 1926
- ಮಹಾದೇವಿಯಕ್ಕನ ವಚನಗಳು, 1927
- ಪ್ರಭುದೇವರ ವಚನಗಳು, 1931
- ದೇವರ ದಾಸಿಮಯ್ಯನ ವಚನಗಳು, 1939(?)
- ಸಕಲೇಶ ಮಾದರಸನ ವಚನಗಳು, 1929
- ‘ಶೂನ್ಯಸಂಪಾದನೆ’ (ಗೂಳೂರು
ಸಿದ್ದವೀರಣ್ಣೊಡೆಯ)
- ಸಿದ್ದರಾಮೇಶ್ವರನ ವಚನಗಳು, 1932
- ‘ಹರಿಹರನ ರಗಳೆಗಳು’,
ಭಾಗ 1 ರಿಂದ ಭಾಗ 4, 1933
- ‘ಹರಿಹರನ ರಗಳೆಗಳು’
ಭಾಗ 5 ರಿಂದ ಭಾಗ 7, 1935-40
- ಆದಯ್ಯನ ವಚನಗಳು, 1930.
ಇವುಗಳಲ್ಲದೆ, ಹಳಕಟ್ಟಿಯವರು, ಗಣದಾಸಿ ವೀರಣ್ಣ, ಸಂಗನ ಬಸವೇಶ್ವರ,
ಘನಲಿಂಗಿ, ಸೊಡ್ಡಳ ಬಾಚರಸ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಮೋಳಿಗೆಯ ಮಾರಯ್ಯ, ಸತ್ಯಕ್ಕ, ಮಧುವರಸ
ಮತ್ತು ಇನ್ನೂ ಅನೇಕ ವಚನಕಾರರ ಕೃತಿಗಳನ್ನು ಸಂಪಾದಿಸಿದ್ದಾರೆ.
ಹಳಕಟ್ಟಯವರು ವಚನಕಾರರು ಮಾತ್ರವಲ್ಲದೆ, ಬೇರೆ ಕವಿಗಳ ಕೃತಿಗಳನ್ನೂ
ಸಂಪಾದನೆ ಮಾಡಿದ್ದಾರೆ. 1939 ರಲ್ಲಿ ‘ಆದಿಶೆಟ್ಟಿ ಪುರಾಣ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ರಾಘವಾಂಕನ
‘ಸೋಮನಾಥಚರಿತೆ’,
ಕೃಷಿಶಾಸ್ತ್ರವನ್ನು ಕುರಿತ ಅಪರೂಪದ ಕೃತಿಯಾದ, ಶ್ರೀ ನಾಗಭೂಷಣ ಘನಮಠದಾರ್ಯನ ‘ಕೃಷಿವಿಜ್ಞಾನದೀಪಿಕೆ’ (1038) ಇಂಥ ಪ್ರಯತ್ನಗಳಲ್ಲಿ ಮುಖ್ಯವಾದವು. ಹಳಕಟ್ಟಿಯವರ ಕೆಲವು
ಕೃತಿಗಳಲ್ಲಿ ವಚನಗಳನ್ನು ಸಂಗೀತಕ್ಕೆ ಅಳವಡಿಸುವ ಪ್ರಯತ್ನವೂ ಇದೆ.
ಹಳಕಟ್ಟಿಯವರು ಅನೇಕ ಸ್ವತಂತ್ರ ಕೃತಿಗಳನ್ನೂ ಬರೆದಿದ್ದಾರೆ.
ಮೂರು ಸಂಪುಟಗಳಲ್ಲಿ ಹೊರಬಂದ ‘ವಚನಧರ್ಮಸಾರ’ವು ಅವರ ಬಹು ಪ್ರಸಿದ್ಧವಾದ ಕೃತಿ.(1931, 1933 ಮತ್ತು 1939)
ಅದು, ವಚನಗಳ ಹಿನ್ನೆಲೆಯಲ್ಲಿ ವೀರಶೈವಧರ್ಮದ ತಾತ್ವಿಕತೆ ಮತ್ತು ಆಚರಣೆಗಳನ್ನು ವಿವರಿಸುತ್ತದೆ. ಅವರು
ಅನೇಕ ವೀರಶೈವ ಸಂತರು, ಸಂಗೀತಗಾರರು ಮತ್ತು ರಾಜರುಗಳ ಜೀವನಚರಿತ್ರೆಗಳನ್ನೂ ಬರೆದಿದ್ದಾರೆ.
‘ಶಿವಾನುಭವ ಶಬ್ದಕೋಶ’ವು
ವೀರಶೈವ ಧರ್ಮಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳ ಅರ್ಥವಿವರಣೆ ಮಾಡುವ ಪುಸ್ತಕ. ಹೊಸದಾಗಿ ಮೂಡಿಬಂದಿರುವ
ವೈಧಾನಿಕತೆಗಳು ಮತ್ತು ವಿಚಾರಗಳ ಹಿನ್ನೆಲೆಯಲ್ಲಿ ಹಳಕಟ್ಟಿಯವರ ಕೆಲವು ನಿಲುವುಗಳು ಹಾಗೂ ವಿಧಾನಗಳನ್ನು
ಇಂದು ಮರುಪರಿಶೀಲಿಸಲಾಗಿದೆ, ಪರಿಷ್ಕರಿಸಲಾಗಿದೆ. ಅದೇನೇ ಇರಲಿ, ಅವರು ಮಾಡಿರುವ ಕೆಲಸವು ತಳಹದಿಯನ್ನು
ಹಾಕಿಕೊಟ್ಟಿದೆ ಮತ್ತು ಎಲ್ಲ ಬಗೆಯ ಪ್ರೀತಿಗೌರವಗಳಿಗೆ ಅರ್ಹವಾಗಿದೆ.
ಹಳಕಟ್ಟಿಯವರು ಕರ್ನಾಟಕದ ಸಂಸ್ಕೃತಿ-ಸಾಹಿತ್ಯಗಳಿಗೆ ನೀಡಿರುವ
ಕಾಣಿಕೆಯನ್ನು ನಾಡು ಕೃತಜ್ಞತೆಯಿಂದ ಸ್ಮರಿಸಿಕೊಂಡಿದೆ. ಅವರು ಬ್ರಿಟಿಷ್ ಸರ್ಕಾರದಿಂದ ರಾವ್ ಬಹದ್ದೂರ್
ಮತ್ತು ರಾವ್ ಸಾಹೆಬ್ ಎಂಬ ಬಿರುದುಗಳನ್ನು ಪಡೆದಿದ್ದರು. 1926 ರಲ್ಲಿ, ಬಳ್ಳಾರಿಯಲ್ಲಿ ನಡೆದ ಕನ್ನಡ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹಳಕಟ್ಟಿಯವರು ವಹಿಸಿದ್ದರು. ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯವು
ಗೌರವ ಡಾಕ್ಟರೇಟ್ ಪದವಿಯನ್ನು ನೀಡಿತು.
ಮುಂದಿನ ಓದು:
- ‘ವಚನ ಪಿತಾಮಹ’,
(ಡಾ. ಹಳಕಟ್ಟಿ ಸ್ಮಾರಕ ಗ್ರಂಥ) ಸಂ. ಪ್ರೊ. ಸಂಗಮನಾಥ ಹಂಡಿ, 1968, ಬಿಜಾಪುರ.
- ‘ವಚನಪಿತಾಮಹ ಹಳಕಟ್ಟಿ ಫಕೀರಪ್ಪನವರು’, ಡಾ. ಎಸ್.ಆರ್. ಗುಂಜಾಳ, 1974, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.
- ‘ಮಣಿಹ’,
(ದಿವಂಗತ ಪೂಜ್ಯ ಫ.ಗು. ಹಳಕಟ್ಟಿ ಸಂಸ್ಮರಣ ಸಂಪುಟ) ಪ್ರಧಾನ ಸಂಪಾದಕರು, ಸಿದ್ದಯ್ಯ ಪುರಾಣಿಕ, ಸಂಪಾದಕರು,
ಆರ್. ಶೇಷಶಾಸ್ತ್ರಿ, 1981, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ, ಬೆಂಗಳೂರು
- ‘F.G. Halakatti’ by Devndrekumara Hakari, 1994,
Sahitya
Academy,
New Delhi.
|